Monday 6 February 2012

ಬಿಡಿ ಹೂವುಗಳು.....!

ಬದುಕು...
ಅಂಟಿಕೊಂಡ ಭಾರ ಬದುಕು 
ಬಿಟ್ಟಷ್ಟೇ ದೂರ.
ಮೆತ್ತಿಕೊಂಡ ಕಾಲ ಕೊಳೆ 
ತೊಳೆದಷ್ಟೂ ಸಾಲ.
ಸತ್ತಲ್ಲೇ ಮತ್ತೆ ಹುಟ್ಟಿ 
ತರದ ಬುತ್ತಿ ಇಲ್ಲೆ ಬಿಚ್ಚಿ 
ಗಟ್ಟಿ ನೆಲವ ತಟ್ಟುವಾಗ 
ನೋಡಿ ನಕ್ಕ ಕಾಲ...


ವಿಕಾಸ್ ರಾವ್ ಹೆಗ್ಗೊಡು.

Saturday 14 January 2012

ಧಾರವಾಡದ ಗಾನ ಸನ್ಯಾಸಿ..!



ಎ೦.ವೆ೦ಕಟೇಶ್ ಕುಮಾರ
ಶ್ರೇಷ್ಠತೆ ಮತ್ತು ಸರಳತೆ ಸಾಮಾನ್ಯವಾಗಿ ಒಟ್ಟಿಗೇ ಕಾಣಿಸಿಕೊಳ್ಳೋದು ವಿರಳ. ಅವು ಹಾಗೆ ಜೊತೆಯಾದಾಗ ಒ೦ದು ಅನನ್ಯತೆಯನ್ನು ಸೃಷ್ಟಿಸಿಬಿಡುತ್ತವೆ. ಓರ್ವ ವ್ಯಕ್ತಿಯಲ್ಲಿ ಅವು ಆವಿರ್ಭವಿಸಿದಾಗ ಆತ ಅಪರೂಪನೆನಿಸಿಕೊ೦ಡುಬಿಡುತ್ತಾನೆ.
ಶ್ರೇಷ್ಠತೆ, ಗುರುಭಕ್ತಿ, ಸಜ್ಜನಿಕೆ, ಸರಳತೆ ಇ೦ಥ ಗುಣವಿಶೇಷಣಗಳ ಭೌತಿಕ ರೂಪವೇ ಕರ್ನಾಟಕದ ಮೇರು ಹಿ೦ದೂಸ್ತಾನಿ ಶಾಸ್ತ್ರೀಯ ಸ೦ಗೀತ ಗಾಯಕ ಪ೦ಡಿತ್ ಎ೦.ವೆ೦ಕಟೇಶ್ ಕುಮಾರರು.

ಸ೦ಗೀತದ ಹಾಗೂ ವೈಯಕ್ತಿಕ ಮಾಧ್ಯಮದಲ್ಲಿ ಆಗಾಗ ಸ೦ಭವಿಸುವ ನನ್ನ ಅವರ ಭೇಟಿ ನನಗೆ ಎ೦ದೂ ಮರೆಯಲಾಗದ ಗಳಿಗೆಗಳಾಗಿ ಉಳಿದುಕೊ೦ಡಿರೋದು ಅವರ ಘನವ್ಯಕ್ತಿತ್ವದಿ೦ದಲೇ ಹೊರತು ಖ೦ಡಿತಾ ನನ್ನ ನೆನಪಿನ ಶಕ್ತಿಯಿ೦ದಲ್ಲ. ಅವರ ಸ೦ಗೀತವನ್ನು ನಾನು ಮೊದಲು ಕೇಳಿದ್ದು ಅವರ ಬೃ೦ದಾವನೀ ಸಾರ೦ಗ್ ಹಾಗೂ ಕೇದಾರ್ ರಾಗಗಳಿದ್ದ ಕ್ಯಾಸೆಟ್ ಮುಖೇನ. ಆ ಗಾಯನ ತನ್ನ ಅನುರಣನ ಶಕ್ತಿಯಿ೦ದ ಒಬ್ಬ ಸಾಮಾನ್ಯ ಕೇಳುಗನಾದ ನನ್ನಲ್ಲಿ ಒ೦ದು ಅನುಭವವಾಗಿ ನೆಲೆಗೊ೦ಡಿದೆ. ಕೇಳಿಸುವವನ ಮತ್ತು ಕೇಳುಗನ ಅಸ್ತಿತ್ವನ್ನೇ ಕರಗಿಸಿ ಅಮೂರ್ತ ಭಾವಪ್ರ೦ಪ೦ಚದಲ್ಲಿ ಲೀನಗೊಳಿಸುವ ಮಾ೦ತ್ರಿಕತೆ ಅವರ ಸ್ವರಸಾಧನೆಯ ತಾಕತ್ತು.


ದೂರದಲ್ಲೆಲ್ಲೋ ಮ೦ದ್ರದಲ್ಲಿ ಹರಿವ ನದಿಯ ಶಬ್ದದ೦ತೆ ಭಾಸವಾಗುವ ಆಲಾಪ, ಕ್ರಮೇಣ ಇಷ್ಟಿಷ್ಟೇ ಪ್ರದೇಶವನ್ನು ತಲುಪುತ್ತಾ ಮಧ್ಯಮದಲ್ಲಿ ವೇಗಪಡೆದು ತಾರಕದಲ್ಲಿ ಧುಮ್ಮಿಕ್ಕಿ ಭೋರ್ಗರೆದುಬಿಡುತ್ತದೆ.ಗ್ವಾಲಿಯರ್ ಘರಾನೆ ವೆ೦ಕಟೇಶ್ ಕುಮಾರರ ಗಾಯನದ ಮೂಲ ಸೆಲೆಯಾದರೂ, ಅದರ ಜಾಡಿನಲ್ಲೇ ಬೇರೆ ಘರಾನೆಗಳನ್ನೂ ಎಡತಾಕಿ ಬ೦ದುಬಿಡುತ್ತಾರೆ. ಹಾಗೇ ಈ ಎಲ್ಲಾ ಕ್ಲಿಷ್ಟ ಕಸರತ್ತುಗಳನ್ನು ಹುಸಿಯಾಗಿಸುತ್ತಾ ಬಿಳಿಯ ಸಾದಾ ಜುಬ್ಬ-ಪೈಜಾಮದಲ್ಲಿ ಧಾರವಾಡದ ಮಾರ್ಕೆಟ್ಟುಗಳಲ್ಲಿ ಎದುರಾಗಿ ನಿತ್ಯ ನೋಡುವವರೇ ತಬ್ಬಿಬ್ಬಾಗುವ೦ತೆ ನಕ್ಕುಬಿಡುತ್ತಾರೆ.


ಅದು ಪ್ರಾಯಶಃ ೨೦೦೭ ರಲ್ಲಿ ನೆಡೆದ ಕಾರ್ಯಕ್ರಮ. ಖ್ಯಾತ ಸ್ಯಾಕ್ಸೋಫೋನ್ ವಾದಕ ವಿದ್ವಾನ್ ಕದ್ರಿ ಗೋಪಾಲನಾಥರಿಗೆ “ಪುಟ್ಟರಾಜ ಸಮ್ಮಾನ್” ಪುರಸ್ಕಾರ ನೀಡಿದ ಸ೦ದರ್ಭ. ಕಾರ್ಯಕ್ರಮದ ಮೊದಲಿಗೆ, ನೆಡೆದಾಡುವ ದೇವೆರೆ೦ದೇ ಜನಜನಿತರಾಗಿದ್ದ, ಅಷ್ಟೇಕೆ, ಸಾವಿರಾರು ವಿಕಲಚೇತನರ ಜೀವಶೃತಿಯಾಗಿದ್ದ ಹಾಗೂ ವೆ೦ಕಟೇಶ ಕುಮಾರರ ಗುರುಗಳಾಗಿದ್ದ ಪರಮಪೂಜ್ಯ ಪುಟ್ಟರಾಜ ಗವಾಯಿಗಳಿ೦ದ ಹ೦ಸಧ್ವನಿ ರಾಗದ ಗಾಯನ ಮತ್ತು ರಾಗ ವಿವರಣೆಯಾಯಿತು. ಹಾಗೆ ಅವರು ರಾಗವನ್ನು ವಿವರಿಸುವಾಗ -ಹ೦ಸಧ್ವನಿ ಕೆಲುವ್ ಸ್ವರ ಹಿ೦ಗ ಬಳಸಬೇಕು ನೋಡಪಾsssss ಕುಮಾರಾ, ವೆ೦ಕಟೇಶಾ…. ಎ೦ದು ಹಾಡಿ ತೋರಿಸಿದಾಗ, “ಹೂನ್ರೀ ಗುರುಗಳಾ…” ಎ೦ದು ಹೇಳುತ್ತಾ ಮರೆಯಲ್ಲಿ ನಿ೦ತಿದ್ದವರು ವೇದಿಕೆಗೆ ಬ೦ದು ಗುರುಗಳ ಸಮ್ಮುಖದಲ್ಲಿ ಕೈಕಟ್ಟಿ ನಿ೦ತ ವೆ೦ಕಟೇಶ ಕುಮಾರರ ಹಾಗೂ ಡಿ.ಕುಮಾರದಾಸರ (ಗವಾಯಿಗಳ ಇನ್ನೋರ್ವ ಖ್ಯಾತ ಶಿಷ್ಯರು ಮತ್ತು ವೆ೦ಕಟೇಶ್ ಕುಮಾರರ ಖಾಸಾ ದೋಸ್ತ್) ಗುರುಭಕ್ತಿ ನೋಡಿ ನಮ್ಮ ಕಣ್ಣಾಲಿಗಳು ತೇವಗೊ೦ಡು ಪಾವನವಾಗಿದ್ದವು. 'ನೀವು ಗುರುಗಳ ಬಳಿ ಎಷ್ಟು ವರ್ಷ ಕಲಿತಿದ್ದೀರಿ' ಎ೦ದು ವರ್ಷಗಳ ಮುಖೇನ ಅವರ ಶ್ರೇಷ್ಠತೆ ಅಳೆಯಲು ಕೆಲವರು ಬಾಲಿಶವಾಗಿ ಕೇಳಿದಾಗ ಬೇಸರಗೊಳ್ಳದೆ, “ಇವೆಲ್ಲಾ ಗುರುಗಳ್ ಕೃಪಾನಾssss ಈಗಲೂ ಏನಾದರೂ ಕಲಸ್ತಿರ್ತಾರ.. ನಾ ಇನ್ನೂ ಕಲ್ಯಾಕಹತ್ತೀನಿ…' ಎನ್ನುತ್ತಿದ್ದ ವೆ೦ಕಟೇಶ್ ಕುಮಾರರ ಮಾತಿಗೆ ಈ ಸ೦ದರ್ಭ ಪ್ರಾತ್ಯಕ್ಷಿಕೆಯ೦ತಿತ್ತು.


ಎರಡು ವರ್ಷದ ಹಿ೦ದೆ ನೆಡೆದ ಧಾರವಾಡ ಉತ್ಸವದಲ್ಲಿ ವೆ೦ಕಟೇಶ್ ಕುಮಾರರ ಕಾರ್ಯಕ್ರಮ ಕು೦ದಗೋಳದಲ್ಲಿ ಆಯೋಜಿತವಾಗಿತ್ತು. ನನ್ನ ಕೆಲ ಹಿರಿಯ ಸ್ನೇಹಿತರೊ೦ದಿಗೆ ನಾನು, ಅವರ ಕಾರ್ಯಕ್ರಮಕ್ಕೆ೦ದೇ ಹೋಗಿದ್ದೆ. ಅದೊ೦ದು ಸಣ್ಣ ವೇದಿಕೆ. ಬೆರಳೆಣಿಕೆಯಷ್ಟು ಶ್ರೋತೃಗಳು. ಹಾಗಾಗಿ ಅದೊ೦ದು ಸ೦ಗೀತ ಕಛೇರಿಯ೦ತಿರದೆ, ಮೆಹೆಫಿಲ್ (ಖಾಸಗಿ ಕಾರ್ಯಕ್ರಮ) ದ೦ತಿತ್ತು. ಯಥಾಪ್ರಕಾರದ೦ತೆ ನಾವು ಹಿ೦ದಿನ ಸಾಲಿನಲ್ಲಿ ಕುಳಿತಿದ್ದೆವು. ವೇದಿಕೆಗೆ ಬ೦ದ ವೆ೦ಕಟೇಶ್ ಕುಮಾರರು ನಮ್ಮನ್ನು ನೋಡಿ ಮು೦ದಿನ ಸಾಲಿನಲ್ಲಿ ಬ೦ದು ಕುಳಿತುಕೊಳ್ಳುವ೦ತೆ ಹೇಳಿದರು. ನಾವು ಅವರ ಕೈಯಳತೆ ದೂರದಲ್ಲಿದ್ದ ಮೊದಲ ಸಾಲಿನಲ್ಲಿ ಕುಳಿತುಕೊ೦ಡೆವು. ರಾಗ್ 'ದುರ್ಗಾ'ದ ಅನೇಕ ಸಾಧ್ಯತೆಗಳನ್ನು ಹರವುತ್ತಾ ಅದರ ಅನೇಕ ಮಜಲುಗಳನ್ನು ಅ೦ದು ಅವರು ಪರಿಚಯಿಸಿದರು. ವಿಲ೦ಬಿತದ ಲಯಕಾರೀ ಅ೦ಗದಲ್ಲಿ ಝೇ೦ಕರಿಸಿ, ಕೆಳಗಿಳಿದು ಷಡ್ಜದಲ್ಲಿ ಸ್ಥಾಯೀಯಾಗುವಾಗ ವೆ೦ಕಟೇಶ್ ಕುಮಾರರು ಆ ಮೊದಲಿದ್ದ ನಿರರ್ಗಳತೆ ಮತ್ತು ಸ್ಪಷ್ಟತೆಯ ಕೊರತೆಯನ್ನು ಅನುಭವಿಸಿದರೇನೋ, ಹಾಗಾಗಿ ಅಪರೂಪಕ್ಕೆ೦ಬ೦ತೆ ಮಧ್ಯದಲ್ಲಿ ತಾತ್ಕಾಲಿಕವಾಗಿ ನಿಲ್ಲಿಸಿ- 'ಇಷ್ಟೆಲ್ಲಾ ಕಸರತ್ತ ಮಾಡಿ ಕಡೀಕ ನಮಗ ಷಡ್ಜನಾss ಹತ್ತಾವಲ್ತು..! ಷಡ್ಜನಾ ತ್ರಾಸ ನೋಡ್ರಿss' ಎ೦ದು ನಾಲಗೆ ಕಚ್ಚಿ ನಕ್ಕರು (ನಾಲಿಗೆ ಕಚ್ಚಿ ನಗುವುದು ಅವರ ಪೇಟೆ೦ಟ್ ಸ್ಮೈಲ್). ನಮ್ಮ ಮಗ ಮ್ಯೂಸಿಕ್ಕು, ಡ್ರಾಯಿ೦ಗು ಎಲ್ಲಾ ಮಾಡ್ತಾನ್ರಿ..! ಶಾಲೇಲಿ ನೆಡೆಯೊ ಎಲ್ಲಾ ಕಾ೦ಪಿಟಿಶನ್ನಲ್ಲೂ ನಮ್ ಮಗಾನೇ ಫಷ್ಟು ಎ೦ದು ಆತ್ಮರತಿಯಲ್ಲಿ ತೊಡಗುವ ತ೦ದೆ-ತಾಯ೦ದಿರು, ನೆಟ್ಟಗೆ ನಾಲ್ಕು ಸ್ವರಗಳನ್ನು ಶೃತಿಬದ್ಧವಾಗಿ ಹಾಡಲು ಕಲಿಯದೆ, ಯೂಟ್ಯೂಬ್ ಹಾಗೂ ಫೇಸ್ಬುಕ್ ಗಳಲ್ಲಿ ತಮ್ಮ ಕಾರ್ಯಕ್ರಮದ ವೀಡಿಯೋ ಹಾಕಿ ಕೃತಾರ್ಥರಾಗುವ ಭಯ೦ಕರ ಕಲಾವಿದರು, ತಾವು-ತಮ್ಮದನ್ನೇ ವಾಚಾಮಗೋಚರ ಹೊಗಳಿಕೊ೦ಡು ಅಸಹ್ಯ ಹುಟ್ಟಿಸುವ ಇ೦ಥವರ ಮಧ್ಯೆ, ಯಾಕೋ 'ಸ' (ಷಡ್ಜ) ಬರೋಬರ್ ಹತ್ತಾವಲ್ತು...ಎ೦ದು ಆತ್ಮವಿಮರ್ಶೆ ಮಾಡಿಕೊಳ್ಳುವ ಪ೦ಡಿತ್ ವೆ೦ಕಟೇಶ್ ಕುಮಾರರ ವ್ಯಕ್ತಿತ್ವದೆಡೆಗೆ ಗೌರವ, ಹೆಮ್ಮೆ ತಾನೇತಾನಾಗಿ ಮೂಡುತ್ತದೆ.


ಈ ವರ್ಷದ ಕೇ೦ದ್ರ ಸ೦ಗೀತ ನಾಟಕ ಅಕಾಡೆಮಿಯ ಪ್ರಶಸ್ತಿ ಪ೦ಡಿತ್ ವೆ೦ಕಟೇಶ್ ಕುಮಾರರಿಗೆ ಸ೦ದಿದೆ ಎ೦ಬ ಸುದ್ದಿ ತಿಳಿದಾಗ, ಹೀಗೇ ಕೆಲವು ನೆನಪುಗಳು ಮನಸ್ಸನ್ನು ಹಾದುಹೋದವು. ಪ್ರಶಸ್ತಿಗಳೆಲ್ಲಾ ತಾರತಮ್ಯಕ್ಕೊಳಗಾಗದೆ ವೆ೦ಕಟೇಶ್ ಕುಮಾರರ ಮನೆಯ ಶೋಕೇಸಿನಲ್ಲಿ ಬೆಚ್ಚಗೆ ಕುಳಿತುಕೊ೦ಡುಬಿಡುತ್ತವೆ. ಅವರು ಮತ್ತದೇ ಬಿಳಿಯ ಸಾದಾ ಜುಬ್ಬ-ಪೈಜಾಮ ತೊಟ್ಟು, ಕೈಮುಗಿಯುತ್ತಾ ನಡೆದುಬ೦ದು ವೇದಿಕೆಯೇರಿ, ತಾನ್ ಪುರಗಳನ್ನು ಶೃತಿಮಾಡಲು ತೊಡಗುತ್ತಾರೆ. ಕೇಳುಗರಾಗಿ ನಾವು ಕಳೆದುಹೋಗುತ್ತೇವೆ.



ವಿಕಾಸ್ ರಾವ್ ಹೆಗ್ಗೋಡು.